ಬಾಂಡುಂಗ್ ಸಮ್ಮೇಳನ -
	1955 ಏಪ್ರಿಲ್ 18ರಿಂದ 24ರ ತನಕ ಬಾಂಡುಂಗ್ ನಗರದಲ್ಲಿ ನಡೆದ ಏಷ್ಯನ್ ಮತ್ತು ಆಫ್ರಿಕನ್ ರಾಷ್ಟ್ರಗಳ ಪ್ರಥಮ ಸಮ್ಮೇಳನ. ಇದನ್ನು ಇಂಡೋನೇಷ್ಯ ಬರ್ಮ, ಸಿಂಹಳ (ಶ್ರೀಲಂಕಾ, ಭಾರತ ಮತ್ತು ಪಾಕಿಸ್ಥಾನಗಳು ನಡೆಸಿದವು. ವಿಶ್ವದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಭಾಗವನ್ನು ಪ್ರತಿನಿಧಿಸುವ 29 ರಾಷ್ಟ್ರಗಳು ಇದರಲ್ಲಿ ಭಾಗವಹಿಸಿದ್ದುವು. ಏಷ್ಯದ ಮೇಲೆ ಪರಿಣಾಮ ಬೀರುವ ತೀರ್ಮಾನಗಳ ಬಗ್ಗೆ ಏಷ್ಯನ್ ರಾಷ್ಟ್ರಗಳೊಂದಿಗೆ ಸಮಾಲೋಚನೆ ನಡೆಸಲು ಪಾಶ್ಚಾತ್ಯರಾಷ್ಟ್ರಗಳೊಡನೆ ತೋರುತ್ತಿರುವ ನಿರಾಶಕ್ತಿಯ ಬಗ್ಗೆ ಸಮ್ಮೇಳನದಲ್ಲಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಲಾಯಿತು. ಸಮ್ಮೇಳನದಲ್ಲಿ ಚರ್ಚಿಸಲಾದ ಇತರ ವಿಷಯಗಳೆಂದರೆ ಚೀನ-ಅಮೆರಿಕ ಸಂಬಂಧ. ಚೀನದೊಡನೆ ಹಾಗೂ ಪಾಶ್ಚಾತ್ಯ ರಾಷ್ಟ್ರಗಳೊಡನೆ ಆಫ್ರೊ-ಏಷ್ಯನ್ ರಾಷ್ಟ್ರಗಳ ಶಾಂತಿಯುತ ಸಂಬಂಧ, ವಸಾಹಾತುಶಾಹಿಗೆ ವಿರೋಧ. ನ್ಯೂ ಗಿನಿಯ ಬಗ್ಗೆ ನೆದರ್‍ಲೆಂಡ್ಸ್ ಹಾಗೂ ಇಂಡೊನೇಷ್ಯಗಳ ನಡುವೆ ಇರುವ ವಿವಾದದ ಇತ್ಯರ್ಥ ಇತ್ಯಾದಿ. ಪಾಶ್ಚಾತ್ಯ ವಸಾಹತುಶಾಹಿಯ ಜೊತೆಗೆ ಪೂರ್ವ ಯೂರೋಪಿನಲ್ಲಿ ಸೋವಿಯತ್ ದೇಶದ ನೀತಿಯನ್ನು ಖಂಡಿಸಬೇಕೆಂದು ಸಮ್ಮೇಳನದಲ್ಲಿ ಒತ್ತಾಯಪಡಿಸಲಾಯಿತು. ಕೊನೆಗೆ ಸೋವಿಯತ್ ದೇಶ ಹಾಗೂ ಪಾಶ್ಚಾತ್ಯರಾಷ್ಟ್ರಗಳನ್ನು ನೇರವಾಗಿ ಖಂಡಿಸದೇ ವಸಾಹತುಶಾಹಿಯನ್ನು ಅದರ ಎಲ್ಲಾ ರೂಪಗಳಲ್ಲೂ ವಿರೋಧಿಸುವ ನಿರ್ಣಯ ಮಾಡಲಾಯಿತು. ವಿಶ್ವಸಂಸ್ಥೆಯ ಘೋಷಣೆ ಮತ್ತು ಪಂಚಶೀಲ ಇವುಗಳ ಆಧಾರದ ಮೇಲೆ ಹತ್ತು ಅಂಶಗಳ ವಿಶ್ವಶಾಂತಿ ಮತ್ತು ಸಹಕಾರಾಭಿವೃದ್ಧಿ ಘೋಷಣೆಯನ್ನು ಒಪಿಕೊಳ್ಳಲಾಯಿತು. ಆರ್ಥಿಕ ಮತ್ತು ಸಾಂಸ್ಕøತಿಕ ಸಹಕಾರಗಳ ಬಗ್ಗೆ ಸಮ್ಮೇಳನದಲ್ಲಿ ಮಾಡಿಕೊಳ್ಳಲಾದ ಒಪ್ಪಂದಗಳಿಂದ ಏನೂ ಸಾಧಿಸಲು ಸಾಧ್ಯವಾಗಲಿಲ್ಲ.  
										(ಜೆ.ಎಸ್.ಎಸ್.; ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ